Tuesday, August 20, 2013

ನಮಗೆ ಬೇಕಾಗಿರುವ ಇಂಗ್ಲಿಷ್

``ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ``ಕನ್ನಡವೇ ಸತ್ಯ ಕನ್ನಡವೇ ನಿತ್ಯ  ಎಂದು ಹಾಡಿ ಕನ್ನಡಿಗರ ಮನಸ್ಸು ಗೆದ್ದ ಕುವೆಂಪು`ಯುಗದ ಕವಿ ಜಗದ ಕವಿಯಾಗಿದ್ದಾರೆ. ತಮ್ಮ ಪ್ರಖರವಾದ ವೈಚಾರಿಕ ಪ್ರಜ್ಞೆಯಿಂದ ಸಮಕಾಲೀನ ಸಂಗತಿಗಳನ್ನು ವಸ್ತುನಿಷ್ಠವಾಗಿ ವಿವೇಚಿಸಿದ ಅಪರೂಪದ ಲೇಖಕರಿವರು.

ಕರ್ನಾಟಕವಷ್ಟೆ ಅಲ್ಲ ಇಡೀ ಭಾರತವೇ ಎದುರಿಸುತ್ತಿರುವ ಪ್ರಚಲಿತ ಸಮಸ್ಯೆ ಭಾಷೆಯದು. ವೈವಿಧ್ಯಮಯ ಭಾಷೆಗಳ ರಾಷ್ಟ್ರವಾದ ಭಾರತದಲ್ಲಿ ಕನ್ನಡ ಭಾಷೆ ಬದುಕಿನ ಹಲವು ಕ್ಷೇತ್ರಗಳಲ್ಲಿ ವಿಶಿಷ್ಟ ಸಮಸ್ಯೆಯನ್ನು ಎದುರಿಸುತ್ತಲಿದೆ. ``ನಮಗೆ ಬೇಕಾಗಿರುವ ಇಂಗ್ಲಿಷಂತಹ ಸಮಸ್ಯೆಯ ಮೇಲೆ ಬೆಳಕು ಚಲ್ಲುವ ಕುವೆಂಪು ವಿರಚಿತ ಲೇಖನ. ಈ ಲೇಖನದಲ್ಲಿ ವಸ್ತುನಿಷ್ಠ ದೃಷ್ಟಿಕೋನದ, ವೈಚಾರಿಕ ಪ್ರಜ್ಞೆಯ ಕುವೆಂಪು ಅವರು ಭಾಷಾರಣರಂಗದಲ್ಲಿಯ ತುಮುಲ ಯುದ್ಧಸನ್ನಿವೇಶವನ್ನು ತರ್ಕಬದ್ಧ ರೀತಿಯಲ್ಲಿ ವಿವೇಚಿಸಿದ್ದಾರೆ.

ಪ್ರದೇಶ ಭಾಷೆ, ಸಂಪರ್ಕ ಭಾಷೆ ಮತ್ತು ಅಂತಾರಾಷ್ಟ್ರೀಯ ಭಾಷೆ ಈ ಮೂರರಲ್ಲಿ ಯಾವುದಕ್ಕೆ ಯಾವ ಸ್ಥಾನ ಕೊಡಬೇಕು? ಏಕೆ ಕೊಡಬೇಕು? ಎಂಬುದೇ ಈ ಲೇಖನದ ತಿರುಳು. ದೇಸಿ ಪರಂಪರೆಯ ಗಾಂಧೀಜಿ ಮತ್ತು ಮನಶಾಸ್ತ್ರಜ್ಞರು, ಶ್ರೇಷ್ಠ ದೇಶಭಕ್ತರು ಈ ವಿಚಾರವಾಗಿ ಕೂಲಂಕಷವಾಗಿ ವಿವೇಚಿಸಿ ಖಚಿತವಾದ ಕೊನೆಯ ಹಂತವನ್ನು ತಲುಪಿದ್ದಾರೆ.

ಪ್ರದೇಶ ಭಾಷೆಗೆ ಪ್ರಥಮ ಸ್ಥಾನ, ಕೇಂದ್ರದ ಆಡಳಿತ ದೃಷ್ಟಿಯಿಂದ ಸಂಪರ್ಕ ಭಾಷೆಗೆ ದ್ವಿತೀಯ ಸ್ಥಾನ, ಅಂತಾರಾಷ್ಟ್ರೀಯಭಾಷೆಗೆ ಕೊನೆಯ ಐಚ್ಛಿಕ ಸ್ಥಾನ. ಪ್ರದೇಶ ಭಾಷೆಯೇ ಆಡಳಿತ ಭಾಷೆಯಾಗಬೇಕು, ಅಲ್ಲಿಯ ಶಿಕ್ಷಣ ಪ್ರದೇಶ ಭಾಷಾ ಮಾಧ್ಯಮದಲ್ಲಿಯೇ ನಡೆಯಬೇಕು ಎಂಬುದು ಈ ಪರಿಣಿತರ ಇಂಗಿತವಾಗಿದೆ. 

ಪ್ರದೇಶ ಭಾಷೆಗೆ ಪ್ರಥಮ ಸ್ಥಾನ ಸಲ್ಲಬೇಕು ಎಂದು ಹೇಳಿದಾಕ್ಷಣ, ಇಂಗ್ಲಿಷ್ ಭಾಷೆಯನ್ನು, ಇಂಗ್ಲಿಷ್ ಭಾಷೆಯ ಅಪಾರ ಜ್ಞಾನವನ್ನು ದೂರಸರಿಸಿದಂತಾಗುತ್ತದೆ ಎಂಬುದು ಒಂದು ಭ್ರಮೆಯಾಗಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಇಂಗ್ಲಿಷನ್ನು ಎರಡು ದೃಷ್ಟಿಯಲ್ಲಿ ಕಲಿಯಬೇಕಾದ ಅಗತ್ಯವಿದೆ. ಒಂದು ಸಾಹಿತ್ಯ ದೃಷ್ಟಿ ಇನ್ನೊಂದು ಭಾಷಾದೃಷ್ಟಿ.

ಪ್ರದೇಶಭಾಷೆಯನ್ನು ಪ್ರೀತಿಸುವ, ವೈಜ್ಞಾನಿಕವಾಗಿ ಪ್ರದೇಶ ಭಾಷೆಯೇ ಶಿಕ್ಷಣ ಮಾಧ್ಯಮ ವಾಗಬೇಕೆನ್ನುವ ಪ್ರದೇಶಭಾಷಾ ಅಭಿಮಾನಿಗಳನ್ನು ವಿದ್ಯಾಸಂಸ್ಕೃತಿದ್ವೇಷಿಗಳೆಂದು, ಸಂಕುಚಿತ ಮನೋಭಾವದವರೆಂದು ಟೀಕಿಸುವ ಅಗತ್ಯವಿಲ್ಲ. ಇಂಗ್ಲಿಷ್ ಮೋಹಿಗಳು ಖಚಿತವಾಗಿ ತಿಳಿಯಬೇಕಾದ ನೈಜ ಸತ್ಯವೊಂದಿದೆ- ಅದು `ಭಾರತೀಯರಿಗೆ ಇಂಗ್ಲಿಷ್ ಬೇಕೇಬೇಕು ಎಂಬುದು.

ಭಾರತದಲ್ಲಿ ಇಂಗ್ಲಿಷ್ ಉಳಿಯಬೇಕೆಂದು ನಿಶ್ಚಯಿಸಿದ ಮೇಲೆ ಅದು ಯಾವ ರೂಪದಲ್ಲಿ, ಯಾವ ಪ್ರಮಾಣದಲ್ಲಿ, ಯಾರಿಗಾಗಿ ಮತ್ತು ಏತಕ್ಕಾಗಿ ಉಳಿಯಬೇಕು ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಇಂಗ್ಲಿಷ್ ಭಾರತವನ್ನು ಪವೇಶಿಸಿದ್ದು ರಾಜಕೀಯ ಕಾರಣಕ್ಕಾಗಿ. ಶಿಕ್ಷಣದಲ್ಲಿ ಇಂಗ್ಲಿಷ್ ಅತ್ಯಗತ್ಯವಾದದ್ದು ಬ್ರಿಟಿಶರ ಆಡಳಿತ ಕಾಲದಲ್ಲಿ. ಆದರೆ ಈಗ ಭಾರತ ಸ್ವತಂತ್ರವಾಗಿದೆ. ಸ್ವಾವಲಂಬಿ ವ್ಯಕ್ತಿತ್ವದ ಮೇಲೆ ಅಭಿವೃದ್ಧಿ ಪಡೆಯುತ್ತಲಿದೆ. ಇಂತಹ ಸಂದರ್ಭದಲ್ಲಿ ಇಂಗ್ಲಿಷ್ ಭಾಷೆಗೆ ಸಲ್ಲಬೇಕಾದ ಸ್ಥಾನಯಾವುದು ? ಇಂದು ಇಂಗ್ಲಿಷನ್ನು ಬಿಡುವಂತಿಲ್ಲ; ಆದರೆ ಅದಕ್ಕೆ ಪ್ರಥಮ ಸ್ಥಾನವನ್ನು ಕೊಡುವಂತಿಲ್ಲ. ಇಂದು ಇಂಗ್ಲಿಷ್ ಹಲವರು ಕಲಿಯುವ ಭಾಷೆಯಲ್ಲ; ಕೆಲವರು ಕಲಿಯುವ ಭಾಷೆ. ಈ ಮಾತುಗಳನ್ನು ಇಂಗ್ಲಿಷ್ ಮೋಹಿಗಳು ಮೊದಲು ಅರ್ಥಮಾಡಿಕೊಳ್ಳಬೇಕಾಗಿದೆ.

ಒಂದು ವೇಳೆ ಇಂಗ್ಲಿಷ್ ಭಾಷೆಗೆ ಪ್ರಥಮಸ್ಥಾನ ಕೊಟ್ಟದ್ದಾದರೆ ಬಾಲಕರು ಮತ್ತು ಯುವಕರು ತಮ್ಮ ಸಾಮರ್ಥ್ಯ ಶಕ್ತಿಯನ್ನೆಲ್ಲ ಆ ಭಾಷೆಯನ್ನು ಕಲಿಯುವದಕ್ಕಾಗಿ ಮೀಸಲಿಡಬೇಕಾಗುತ್ತದೆ. ವ್ಯಕ್ತಿಯ ಭಾವ ಮತ್ತು ಜ್ಞಾನ ಅರಳಬೇಕಾದ ಸಂದರ್ಭದಲ್ಲಿಯೇ ಅವನ ಅಶಾಭಾವನೆಯನ್ನು ಚಿವುಟಿಹಾಕಿ ಅಧೈರ್ಯ ಉಂಟು ಮಾಡಿ ಅವರ ಬದುಕಿಗೆ ಅಡತಡೆಯಾಗುತ್ತದೆ. ಬಾಲಕರ, ಯುವಕರ ಭಾವ ಮತ್ತು ಚಿಂತನೆ ಜ್ಞಾನವಾಗಿ ಪರಿವರ್ತನೆ ಹೊಂದದೆ   ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತದೆ. ಅಲ್ಲದೆ ಭಾರತದಂತಹ ದೇಶದಲ್ಲಿ ಇಂಗ್ಲಿಷ್ ಪಾಠ ಮಾಡುವ ಶಿಕ್ಷಕರ ಮಟ್ಟವು ತುಂಬಾ ಇಳಿದುಹೋಗಿದೆ. ಹೀಗಾಗಿ ಈ ಹೊರಭಾಷೆಯ ಕಲ್ಲುಚಪ್ಪಡಿ ನಮ್ಮ ವಿದ್ಯಾರ್ಥಿಗಳ ತಲೆಯ ಮೇಲೆ ಬೀಳದಂತೆ ರಕ್ಷಿಸಬೇಕಾಗಿದೆ. ಬಾಲಕ ಮತ್ತು ಯುವಕರ ಕಲಿಕಾಮಟ್ಟ ಸುಧಾರಿಸಬೇಕಾದರೆ ಇಂಗ್ಲಿಷ್ ಪಠ್ಯಪುಸ್ತಕವನ್ನು ಹೆಚ್ಚಿಸಬೇಕಾಗಿಲ್ಲ; ಪರೀಕ್ಷೆಯಲ್ಲಿ ಕೃಪಾಂಕಗಳನ್ನು ಕೊಡಬೇಕಾಗಿಲ್ಲ. ಇಂತಹ ದುರಂತ ನಾಟಕವನ್ನು ಬಿಟ್ಟು ಕೆಲವರಿಗೆ ಮಾತ್ರ ಇಂಗ್ಲಿಷ್ ಭಾಷೆಯನ್ನು ಸಮರ್ಪಕವಾಗಿ ಕಲಿಸಬೇಕು. ಅವರು ಆ ಭಾಷೆಯಲ್ಲಿ ಹೆಚ್ಚಿನ ಪ್ರೌಢಿಮೆ, ಪರಿಣತಿ ಪಡೆಯಬೇಕು. ಆ ಭಾಷೆಯನ್ನು ಅಸ್ಖಲಿತವಾಗಿ ಸರಳವಾಗಿ ಮಾತನಾಡಬೇಕು. ನಮ್ಮ ಸಾಹಿತ್ಯ, ಸಂಸ್ಕೃತಿಯನ್ನು ಇಂಗ್ಲಿಷ್ ಭಾಷೆಗೆ ಪರಿಚಯಿಸುವ, ಇಂಗ್ಲಿಷ್ ಭಾಷೆಯ ಅಪಾರ ಜ್ಞಾನವನ್ನು ಪ್ರದೇಶ ಭಾಷೆಗೆ ತಂದುಕೊಡುವ ಮಧ್ಯವರ್ತಿಗಳಾಗಬೇಕು.

ಸಾಹಿತ್ಯ ದೃಷ್ಟಿಯಿಂದ ಇಂಗ್ಲಿಷ್ ಭಾಷೆಯನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಅದೇ ಭಾಷೆಯ ಮೂಲ ಕೃತಿಯನ್ನು ಓದಿ ತಿಳಿಯಬೇಕಾದಷ್ಟು ಪಾಂಡಿತ್ಯ ಪಡೆಯಬೇಕಾದ ಅಗತ್ಯವಿಲ್ಲ. ನಮ್ಮ ಪ್ರದೇಶ ಭಾಷೆಯಲ್ಲಿಯೇ ಆ ಸಾಹಿತ್ಯ ಸೌಂದರ್ಯವನ್ನು ಸವಿದರೆ ಅದು ಅವರಿಗೆ ರಕ್ತಗತವಾಗುವದರಲ್ಲಿ ಸಂಶಯವಿಲ್ಲ. ಮಿಲ್ಟನ್, ವರ್ಡ್ಸ್‌ವರ್ತ್, ಶೇಕ್ಸ್‌ಪೀಯರ್ ಮುಂತಾದ ಕವಿಗಳ ಕೃತಿಗಳನ್ನು ಕನ್ನಡದ ಮೂಲಕವೇ ಬೋಧಿಸಬಹುದು ಎಂಬ ನಿಜಸ್ಥಿತಿಯನ್ನು ನಾವೆಲ್ಲರೂ ಅರಿಯಬೇಕಾಗಿದೆ. ಇಂಗ್ಲಿಷ್ ಭಾಷೆಯಲ್ಲಿ ತನ್ನ ಅನುಭವವನ್ನು ವ್ಯಕ್ತಗೊಳಿಸುವ ಶಕ್ತಿಯಿಲ್ಲದ ವಿದ್ಯಾರ್ಥಿ ಕಂಠಪಾಠ ಮಾಡಿ ಉರುಹೊಡೆದು ತೇರ್ಗಡೆಯಾದರೆ ಅದರಿಂದಾಗುವ ಪ್ರಯೋಜನವೇನು ? ನಮ್ಮಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗುವುದಕ್ಕೆ ಇಂಗ್ಲಿಷ್ ಮಾಧ್ಯಮ ಕಾರಣವಾಗಿದೆ. ಅವರ ಬುದ್ಧಿಶಕ್ತಿ, ವಿಷಯ ಸಂಗ್ರಹ ಸಾಕಷ್ಟಿದ್ದರೂ ಅದು ಪರ್ಯೋಜನಕ್ಕೆ ಬರುವುದಿಲ್ಲ.

ಈ ಎರಡೂ ದೃಷ್ಟಿಯಿಂದ ಇಂಗ್ಲಿಷನ್ನು ಸಮರ್ಥವಾಗಿ ಕಲಿಸಿದರೆ ಇಂಗ್ಲಿಷ್ ಭಾಷೆ ಕೆಲವರಲ್ಲಿ ಭಾಷೆಯಾಗಿ ಕೆಲವರಲ್ಲಿ ಸಾಹಿತ್ಯವಾಗಿ ಜೀವಂತವಾಗಿ ಉಳಿದುಕೊಳ್ಳುತ್ತದೆ. ಈ ಪ್ರಯೋಗದಲ್ಲಿ ವಿದ್ಯಾರ್ಥಿಯ ಭಾವನಷ್ಟವಾಗಲಿ, ಬುದ್ಧಿದಾರಿದ್ರ್ಯವಾಗಲಿ ಸಂಭವಿಸುವದಿಲ್ಲ.

ಕನ್ನಡ ಸಾಹಿತ್ಯ ವೈವಿಧ್ಯಮಯ ಕ್ಷೇತ್ರಗಳಲ್ಲಿ ಹೊಸ ಹೊಸ ವಿನ್ಯಾಸದಲ್ಲಿ ಬೆಳೆದು ಪ್ರಗತಿ ಹೊಂದುತ್ತಲಿದೆ. ಇಂಗ್ಲಿಷ್ ಸಾಹಿತ್ಯವನ್ನು ಸಮಗ್ರವಾಗಿ ಓದಿದ ಪಂಡಿತರು ಸಹ ಬೆರಗಾಗುವಷ್ಟು ಕನ್ನಡ ಸಾಹಿತ್ಯ ಸಮೃದ್ಧಿ ಹೊಂದಿದೆ ; ಶ್ರೇಷ್ಠತೆಯನ್ನು ಪಡೆದಿದೆ. ಆದ್ದರಿಂದ ``ನಮಗೆ ಬೇಕಾಗಿರುವ ಇಂಗ್ಲಿಷ್ ಈ ಸ್ವರೂಪದಲ್ಲಿದ್ದರೆ ಮಾತ್ರ ಇಂಗ್ಲಿಷ್‌ಗೂ ಪ್ರಯೋಜನ , ಕನ್ನಡಕ್ಕೂ ಪ್ರಯೋಜನ ಎಂಬುದುಕುವೆಂಪು ಅವರ ಸ್ಪಷ್ಟ ಅಭಿಪ್ರಾಯವಾಗಿದೆ.

*****

ಮಕ್ಕಳ ಭಾವ ಕೋಶದಲ್ಲಿ ಕನ್ನಡ ಹರಳುಗಟ್ಟಬೇಕು

ಕನ್ನಡತನ ಮಕ್ಕಳ ಭಾವಕೋಶದಲ್ಲಿ ನೆಲೆಗೊಳ್ಳಬೇಕಾದರೆ ಮೊದಲು ಆ ವಿಷಯದಲ್ಲಿ ಅರಿವು-ಅಭಿರುಚಿ ಹುಟ್ಟಿಸಬೇಕು. ಅಬ್ಬರ,ಅದ್ದೂರಿ,ಸಂಭ್ರಮದ ಸಮ್ಮೇಳನ ಉತ್ಸವಗಳು ಕನ್ನಡದ ಬಗೆಗೆ ಅಭಿಮಾನವನ್ನು ಹುಟ್ಟಿಸುತ್ತವೆ ಎಂಬುದರಲ್ಲಿ ಎರಡುಮಾತಿಲ್ಲ. ಕೇವಲ ಅಭಿಮಾನ ಪಟ್ಟರೆ ಸಾಲದು. ಅರಿವು-ಅಭಿರುಚಿ ಹುಟ್ಟಿಸುವ ಕೆಲಸವೂ ನಿರಂತರವಾಗಿ ನಡೆಯಬೇಕು. ಸಮ್ಮೇಲನ,ಸಮಾವೇಶಗಳು ಒಂದು ನೆಲೆಯಲ್ಲಿ ಪ್ರೌಢರಿಗೆ ಕನ್ನಡ ಸಾಹಿತ್ಯ-ಸಂಸ್ಕೃತಿಗಳ ಸೌರಭ ಪಸರಿಸಿ ಅಭಿಮಾನವನ್ನು ವರ್ಧಿಸುತ್ತವೆ. ಈ ಸೌರಭದ ಸಾರವನ್ನು ಸ್ವೀಕರಿಸುವ ಮನಸ್ಸುಗಳು ಬಾಲ್ಯದಲ್ಲಿ ಸಾಹಿತ್ಯಿಕ-ಸಾಂಸ್ಕೃತಿಕ ಪರಿಸರದೊಂದಿಗೆ ಮುಖಾಮುಖಿಯಾಗಿದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಕೇವಲ ಮೇಲ್ಪದರಿನಲ್ಲಿ ಅಭಿಮಾನದ ಅಲೆಗಳೆದ್ದು ಕೆಲಕ್ಷಣ-ಕೆಲದಿನಗಳಲ್ಲಿ ಮಾಯವಾಗುವ ಅಪಾಯವಿದೆ. ಅದಕ್ಕಾಗಿ ಮಕ್ಕಳಲ್ಲಿ ಕನ್ನಡ ಪ್ರೀತಿ ಹುಟ್ಟುವ ಹಾಗೆ ಚಟುವಟಿಕೆಗಳನ್ನು (ಸಮಾರಂಭ -ಕಾರ್ಯುಕ್ರಮವಲ್ಲ) ರೂಪಿಸುವದರತ್ತ ಕಸಾಪ ಆಸಕ್ತಿ ವಹಿಸಬೇಕು; ಮಕ್ಕಳಲ್ಲಿ ಕನ್ನಡದ ಅರಿವು-ಅಭಿಮಾನ-ಪ್ರಜ್ಞೆಯನ್ನು ಜಾಗೃತಗೊಳಿಸಬೇಕು.

ಪ್ರಾಥಮಿಕ,ಪ್ರೌಢ ಮತ್ತು ಪದವಿ ಪೂರ್ವ ಸೈಕ್ಷಣಿಕ ಹಂತಗಳಲ್ಲಿ ಅವರ ವಯೋಸಹಜ ಮನೋವೃತ್ತಿ ಗನುಗುಣವಾಗಿ ಚಟುವಟಿಕೆಗಳ ಕ್ರಿಯಾಯೋಜನೆಯನ್ನು ರೂಪಿಸಬೇಕು.  ಆ ಚಟುವಟಿಕೆಗಳು ವರ್ಷಪೂರ್ತಿ ಅವರ ಶೈಕ್ಷಣಿಕ ಕಲಿಕೆಯ ಅವಿಭಾಜ್ಯ ಅಂಗವೆಂಬಂತೆ ನಡೆಯಬೇಕು. ಕಸಾಪ ತಾಲೂಕು/ಹೋಬಳಿ ಘಟಕಗಳು ಒಂದು ಕನ್ನಡಪಡೆಯನ್ನು ರಚಿಸಬೇಕು. ಅದರಲ್ಲಿಕನ್ನಡತನದ ಚಟುವಟಿಕೆಗಳಲ್ಲಿ ಅಭಿರುಚಿ-ಪರಿಣತಿ ಇರುವ ಆಸಕ್ತರನ್ನೇ ಆರಿಸಬೇಕು. ಅವರು ಕನ್ನಡವನ್ನು ಪ್ರೀತಿಸುವ ಬೆಳೆಸುವ ಶ್ರದ್ಧೆಯುಳ್ಳವರಾಗಿರಬೇಕು. ತಮ್ಮನ್ನು ಕನ್ನಡಕ್ಕೆ ಅರ್ಪಿಸಿಕೊಳ್ಳಬೇಕು. ತಾವು ಪಡೆದ ಕನ್ನಡ ಸಾಹಿತ್ಯ,ಸಂಸ್ಕೃತಿ,ಭಾಷಾ ಸೊಗಡು ಸೊಬಗುಗಳನ್ನು ಉಣಬಡಿಸಲು ಸಿದ್ಧರಿರಬೆಕು.

ಸುತ್ತ ಮುತ್ತಲ ಶಾಲೆಗಳಿಗೆ ತೆರಳಿ ತರಗತಿಗಳಲ್ಲಿ ಕನ್ನಡತನದ ಚಟುವಟಿಕೆ ನಡೆಸಬೇಕು. ತಾಲೂಕಿನ ಶಿಕ್ಷಣಾಧಿಕಾರಿಗಳ ಸಹಯೋಗ ಪಡೆಯಬೇಕು.ಆ ಚಟುವಟಿಕೆಗಳು ಮಕ್ಕಳಲ್ಲಿ ಬೆರಗು ಕುತೂಹಲ ಹುಟ್ಟಿಸಿ ರಂಜನೆಯನ್ನೂ ನೀಡುವ, ಕಲ್ಪನೆ ಕನಸುಗಳನ್ನು ಬಿತ್ತುವ ಸೃಜನಶೀಲ ಗುಣಹೊಂದಿರಬೇಕು.

ಕಸಾಪದ ಕ್ರಿಯಾಯೋಜನೆಯಲ್ಲಿ ಈ ಕೆಳಗಿನ ಮಾದರಿಯ ಚಟುವಟಿಕೆಗಳಿರಬೇಕು.

* ಬಿಡಿಸೇಳು ಒಗಟು : ಜನಪದ ಒಗಟು, ಲೆಕ್ಕ, ಭಾಷಾ ಚಮತ್ಕಾರಗಳನ್ನು ಬಳಸುವುದು.

* ಚಿತ್ರ ಚಿತ್ತಾರ : ಅಕ್ಷರಗಳಲ್ಲಿ ಚಿತ್ರಬಿಡಿಸುವುದು. (ಇ ಅಕ್ಷರದಲ್ಲಿ ಇಲಿ, ಗಿ ಅಕ್ಷರದಲ್ಲಿ ಗಿಳಿ)

* ಪುಸ್ತಕ ಪ್ರೀತಿ : ಕತೆ ಕವಿತೆ ಪ್ರಬಂಧ ಪ್ರವಾಸ ಜೀವನ ಚರಿತ್ರೆ ಮುಂತಾದ ಪುಸ್ತಕಗಳನ್ನು ಒಂದು ತಾಸು ಓದಲು  ಕೊಟ್ಟು ಅನಂತರ ಕೃತಿ ಕುರಿತು ಮಾತನಾಡಿಸುವುದು/ಬರೆಸುವುದು.

* ಪದಬಂಧ : ತರಗತಿಗೆ ತಕ್ಕಂತೆ ಪದಬಂಧ ರಚಿಸಿ ನಿರ್ದಿಷ್ಟ ಅವಧಿಯಲ್ಲಿ ಬಿಡಿಸಲು ಹೇಳುವುದು.

* ಪದ ಹುಡುಕು : ರತ್ನಕೋಶ ಕೊಟ್ಟು ಪದಗಳನ್ನು ಹುಡುಕಿ ಪುಟಸಹಿತ ಬರೆಯಲು ಹೇಳುವುದು.

* ಅಕ್ಷರ ಸುಡೊಕು : ಕೋಟ ಶಿವರಾಮ ಕಾರಂತ- ಈ ರೀತಿಯ  ಒಂಬತ್ತು ಅಕ್ಷರಗಳ ಸುಡೊಕು ರಚಿಸಿ ಬಿಡಿಸಲು ಹೇಳುವುದು.

* ಕತೆ ಕಟ್ಟು : ಜನಪದ ಸಂಚಿತ,ಹಾಸ್ಯ,ಚಮತ್ಕಾರಿಕ ಕತೆಗಳನ್ನು ಹೇಳಿ ಅವರಿಂದ ಮರಳಿ ಬರೆಸುವುದು.

* ಆಡು-ಹಾಡು : ಜನಪದ ಇಲ್ಲವೆ ಪ್ರಸಿದ್ಧ ಕವಿಗಳ ಸರಳ ಸುಂದರ ಕವಿತೆಗಳನ್ನು ,ಶಿಶುಪ್ರಾಸಗಳನ್ನು ಹಾಡಿಸುವ ಕ್ರಿಯಾತ್ಮಕ ಚಟುವಟಿಕೆ

* ಮಕ್ಕಳ ಕೃತಿಗಳ ಪರಿಚಯ ; ಮಕ್ಕಳೇ ಬರೆದ ಕೃತಿಗಳನ್ನು ಓದಿ,ವಾಚನ ಮಾಡಿ ಅವರಲ್ಲಿಯ ಸೃಜನಶೀಲ ಪ್ರತಿಭೆಯನ್ನು ಉದ್ದೀಪಿಸುವುದು.

* ಮಕ್ಕಳಿಗಾಗಿ ರಚಿತವಾದ ಕೃತಿಗಳ ಪರಿಚಯ ; ಕುವೆಂಪು, ರಾಜರತ್ನಂ,ಶಂ.ಗು.ಬಿರಾದಾರ ಮುಂ. ಕೃತಿಗಳನ್ನು ವಾಚಿಸಿ ಅಭಿರುಚಿ ಹುಟ್ಟಿಸುವುದು.

* ಅದ್ಭುತಲೋಕ-ವಿಸ್ಮಯ ವಿಶ್ವ : ಪೂರ್ಣಚಂದ್ರ ತೇಜಸ್ವಿ ಅವರ ವಿಸ್ಮಯ-೧,೨,೩, ಮಿಲೆನಿಯಂ ಸರಣಿ , ಮಕ್ಕಳ ಸಾಹಸದ ಕೃತಿಗಳನ್ನು ಪರಿಚಯಿಸುವುದು. ಮತ್ತು ಪ್ರದರ್ಶಿಸುವುದು.

ಹೀಗೆ ಕೇಳುವ-ಹೇಳುವ ವಾಚಕ ಪರಂಪರೆಯ ಕನ್ನಡ, ಆಡುವ ಹಾಡುವ ಕ್ರಿಯಾತ್ಮಕ ಕನ್ನಡ, ಬರೆಯುವ-ಓದುವ ಮಾರ್ಗ ಕನ್ನಡ ಮತ್ತು ಕತೆ ಕವಿತೆಗಳನ್ನು  ಲಯಬದ್ಧವಾಗಿ ಓದುವ ವಾಚನ ಕನ್ನಡವನ್ನು ಅವರ ಭಾವಕೋಶದಲ್ಲಿ  ಬುದ್ಧಿಕೋಶದಲ್ಲಿ ನೆಲೆಗೊಳಿಸಬೇಕು.

ಎಸ್. ಬಿ. ಜೋಗೂರ ಅವರು ಹೇಳುವಂತೆ ಗ್ರಂಥಾಲಯ-ಪುಸ್ತಕ ಸಂಸ್ಕೃತಿಯನ್ನೂ ಬೆಳೆಸಬೇಕು.

ಇಂತಹ ಚಟುವಟಿಕೆಗಳನ್ನು ನಾವು (ನಾಲ್ಕಾರು ಜನ ಗೆಳೆಯರು)` ಹುಡುಗಾಟ-ಹುಡುಕಾಟ ತಂಡ ಕಟ್ಟಿಕೊಂಡು ೧೦ ವರ್‍ಷಗಳಿಂದ ನಡೆಸುತ್ತ ಬಂದಿದ್ದೇವೆ. ವರ್ಷದಲ್ಲಿ ನಾಲ್ಕಾರು ಶಾಲೆಗಳಲ್ಲಿ ಮಾತ್ರ ನಡೆಸಲು ಸಾಧ್ಯವಾಗಿದೆ. ಬಾಲವಿಕಾಸ ಅಕೆಡೆಮಿಯವರ ಸಹಯೋಗದಲ್ಲಿಯೂ ಎರಡು ವರ್‍ಷ ಚಟುವಟಿಕೆ ನಡೆಸಿದ ಅನುಭವವಿದೆ. ನಮ್ಮ ಸುತ್ತಮುತ್ತಲ ಊರುಗಳಲ್ಲಿ ಅಲ್ಲದೇ ಧಾರವಾಡ ಬಾಲಬಳಗ ಶಾಲೆಯಲ್ಲಿಯೂ ಒಮ್ಮೆ ಈ ಪ್ರಯೋಗವನ್ನು ಮಾಡಿದ್ದೇವೆ.

ಮಕ್ಕಳಲ್ಲಿ ಮಕ್ಕಳಾಗಿ ಬೆರೆತು ನಡೆಸುವ ಈ ಚಟುವಟಿಕೆ ಮಕ್ಕಳಿಗೆ ಮತ್ತು ನಮಗೆ ಹೊಸ ಸಾಧ್ಯತೆಯ ದಾರಿಯನ್ನು ತೋರಿಸಿದೆ.ಅವರಲ್ಲಿ ಓದಿನ ಹಸಿವನ್ನು ಹುಟ್ಟಿಸಿದೆ.ಅವರ ಸೃಜನಶೀಲ ಪ್ರತಿಭೆಯನ್ನು ಚೇತನಗೊಳಿಸಿದೆ.

                                     

ದೇವನೂರ ಅವರ ' ಒಡಲಾಳ '

ಸಾಹಿತ್ಯ ಬದುಕಿನ ಗತಿಬಿಂಬವಾಗಿ ಮನುಷ್ಯ ಸಮಾಜದ ಸೂಕ್ಷ್ಮಾತಿಸೂಕ್ಷ್ಮ ಸಂವೇದನೆಗಳನ್ನು ಸೆರೆಹಿಡಿಯುವ ಪ್ರಕ್ರಿಯೆಯಲ್ಲಿ ತೊಡಗಿದೆ. ಸಣ್ಣಕತೆ ಕಾದಂಬರಿಗಳು ಸಮಕಾಲೀನ ಜೀವನದ ಜೀವದ್ರವ್ಯಗಳನ್ನು ಅತ್ಯಂತ ವೈಶಿಷ್ಟ್ಯಪೂರ್ಣವಾಗಿ, ವೈವಿಧ್ಯಮಯವಾಗಿ ಎಲ್ಲ ಆಯಾಮಗಳ ದರ್ಶನವನ್ನು ಮಾಡಿಸುತ್ತದೆ.

ಕನ್ನಡ ದಲಿತ ಪ್ರಜ್ಞೆಯ, ತೀವ್ರ ಸಂವೇದನೆಯ ಲೇಖಕರಾದ ದೇವನೂರ ಮಹಾದೇವ ಅವರ `ಒಡಲಾಳ ದಲಿತರ ಬದುಕಿನ ಪರಿಪೂರ್ಣ ಚಿತ್ರಣ ನೀಡುವ ಕಾವ್ಯಮಯವಾದ ಕಾದಂಬರಿಯಾಗಿದೆ. ಯಾವ ಕಾಲದಲ್ಲಿ ದಲಿತ ಪ್ರಜ್ಞೆ, ಪ್ರತಿಭಟನೆ, ಘೋಷಣೆ, ಸಿದ್ಧಾಂತದ ಹಂತದಲ್ಲಿತ್ತೋ ಅದೇ ಕಾಲದಲ್ಲಿ ಅತ್ಯಂತ ಸೂಕ್ಷ್ಮ ಸಂವೇದನೆಯ ಸುಂದರ ಕಲಾಕೃತಿ ಮೂಡಿಬಂದಿರುವುದು ಕನ್ನಡ ಸಾಹಿತ್ಯ ವಿಸ್ಮಯಗಳಲ್ಲೊಂದು.

ಶೋಷಿತರ ಬದುಕಿನ ಅವಮಾನ, ಬಡತನ, ದ್ವೇಷ, ಅಸೂಹೆಗಳ ಮಧ್ಯದಲ್ಲಿ ಚಿಲ್ಲರೆ ಮನಸ್ಸು, ಕುಟುಂಬದ ಆಂತರಿಕ ಕಲಹ, ಮೇಲ್ವರ್ಗದವರ ದರ್ಪ-ದೌರ್ಜನ್ಯ, ಅಧಿಕಾರಶಾಹಿ ನಡೆಸುವ ಕ್ರೌರ್ಯ ಅಟ್ಟಹಾಸಗಳ ಚಿತ್ರಣ ಏಕಸೂತ್ರದಡಿಯಲ್ಲಿ ಒಂದು ಸುಂದರ ಶಿಲ್ಪವಾಗಿ ಒಡಲಾಳದಲ್ಲಿ ಅನಾವರಣಗೊಂಡಿದೆ.

ಭೂಮಿತೂಕದ, ಸಾಕುವ ಸಾಮರ್ಥ್ಯವುಳ್ಳ ತಾಯಿ ಅಸಹಾಯಕಳಾಗಿ ತನ್ನ ಕಾಲಪ್ರಜ್ಞೆಯ ಸಂಕೇತವಾದ ಹುಂಜವನ್ನು ಕಳೆದುಕೊಂಡು ದಯನೀಯ ಸ್ಥಿತಿ ತಲುಪಿದೆಯಂಬುದಕ್ಕೆ ನಿದರ್ಶನ ಸಾಕವ್ವನ ಪಾತ್ರ. ಮೂರು ಗಂಡು ಎರಡು ಹೆಣ್ಣುಮಕ್ಕಳ ತಾಯಿಯಾದ ಸಾಕವ್ವ ಈ ಕಾದಂಬರಿಯ ಕೇಂದ್ರ ಶಕ್ತಿಯಾಗಿದ್ದಾಳೆ ; ಪಾಲನಸಕ್ತಿಯ ಪ್ರತೀಕವಾಗಿದ್ದಾಳೆ. ಕಾಳಣ್ಣ ಕತ್ತಲೆಯ ಅಜ್ಞಾನದ ದಲಿತ ಬದುಕನ್ನು ಒಪ್ಪಿಕೊಂಡು ಅದರಲ್ಲಿಯೇ ಸಾರ್ಥಕತೆಯನ್ನು ಕಾಣುವ ವ್ಯಕ್ತಿ. ಗಂಡನನ್ನು, ಕೇರಿಯ ರೀತಿ ನೀತಿಗಳನ್ನು ಪರಿಪಾಲಿಸುವ ವಿಧೇಯ ವ್ಯಕ್ತಿ ಕಾಳಣ್ಣನ ಹೆಂಡತಿ. ಎರಡನೆಯ ಮಗ ಸಣ್ಣಯ್ಯ ಒಂದಿಷ್ಟು ಆರ್ಥಿಕ ಬಲವನ್ನು ಹೊಂದಿದವನಾಗಿ ಕಂಡುಬರುವುದು ಹೆಂಡತಿ ಚಲುವಮ್ಮನ ಪ್ರಭಾವದಿಂದ. ಒಂದು ಕಡೆ ತಾಯಿಯ ಆಸ್ತಿಯ ನಿಜ ವಾರಸುದಾರನಾಗಿ ಬದುಕಬೇಕೆಂಬ ಹಂಬಲ ಇನ್ನೊಂದೆಡೆ, ಹೆಂಡತಿ ಪ್ರಭಾವದಲ್ಲಿ ಸಿಕ್ಕು ತೊಳಲಾಡಿ ಕಮರಿಹೋಗುವ ಇಬ್ಬಂದಿ ಸ್ಥಿತಿಯಲ್ಲಿದ್ದಾನೆ. ಈ ಸಣ್ಣಯ್ಯನ ಮಕ್ಕಳು ದಲಿತರ ಮುಂದಿನ ತಲೆಮಾರಿನ ಅಸಹಾಯಕ ಪ್ರತಿನಿಧಿಗಳಾಗಿದ್ದಾರೆ. ಮೂರನೆಯ ಮಗ ಗುರುಸಿದ್ದು ಸಾಂಪ್ರದಾಯಿಕ ದಾಸ್ಯತ್ವ ಒಪ್ಪಿಕೊಳ್ಳದೆ ಪ್ರಜಾಪ್ರಭುತ್ವದ ಉನ್ನತಿಯ ಹಕ್ಕು ಹೊಂದುವ ಹೋರಾಟದ ಪ್ರತಿನಿಧಿಯಾಗಿದ್ದಾನೆ. ಸಮರ್ಥವಾಗಿ ಹೋರಾಟ ಮಾಡಲಾಗದ ಸ್ಥಿತಿಯಲ್ಲಿ ದಲಿತರ ನೋವು-ಅವಮಾನಗಳಿಂದ ಪಾರಾಗಲು ಮಾರಿಗುಡಿ, ನಾಟಕ ಕಲೆಯ ಮೊರೆಹೋಗಿದ್ದಾನೆ.

 ಕಥಾನಾಯಕಿ ಸಾಕವ್ವನ ಹಿರಿಮಗಳು  ಗೌರಮ್ಮ ಗಂಡನಿಂದ ದೂರತಳ್ಳಲ್ಪಟ್ಟು ತವರಿನ ಹಂಗಿನರಮನೆಯ ಹಟ್ಟಿಯಲ್ಲಿ ರೋಗಿಷ್ಟ ಹಿರಿಮಗನನ್ನು, ಕಿರಿಮಗನನ್ನು ಬೆಳೆಸಬೇಕಾದ ಅಸಹಾಯಕ ಮಹಿಳೆಯ ಪ್ರತಿನಿಧಿಯಾಗಿದ್ದಾಳೆ. ಈಕೆಯ ಎಲ್ಲಾ ರೀತಿಯ ಸಮಸ್ಯೆಗಳಿಗೆ ಭವಿಷ್ಯದ ಪರಿಹಾರವೆಂಬಂತೆ ಕಂಡು ಬರುವ ಶಿವು ಶಿಕ್ಷಣ ಪಡೆಯುವ ಹಂಬಲದ ಬಾಲಕನಾಗಿದ್ದಾನೆ. ತಾಯಿ ಮತ್ತು ರೋಗಿಷ್ಟ ಸಹೋದರನನ್ನು ಸಾಕಬೇಕಾದ ಜವಾಬ್ದಾರಿ ಮತ್ತು ತಮ್ಮ ಇಂದಿನ ಸ್ಥಿತಿಗೆ ಕಾರಣವಾದ ತಂದೆಯ ವ್ಯಕ್ತಿತ್ವಕ್ಕೆ ಪ್ರತಿರೋಧವಾಗಿ ಬೆಳೆಯುವ ವ್ಯಕ್ತಿಯಾಗಿದ್ದಾನೆ. ಅಲ್ಲದೆ ಇಡೀ ಕಾದಂಬರಿಯ ದಲಿತರ ನೋವಿನ ಬಿಡುಗಡೆಯ ಅಶಾವಾದದ ವಿಶಿಷ್ಟ ಸಂಕೇತವಾಗಿದ್ದಾನೆ. ಇಂತಹ ಜೀವನ್ಮುಖಿ ಧೋರಣೆಯ ಶಿವುನ ಪಾತ್ರಕ್ಕೆ ಅದಮ್ಯ ಚೇತನ ತುಂಬುವವಳು  ಆತನ ಚಿಕ್ಕಮ್ಮ  ಪುಟ್ಟಗೌರಿ. ತನ್ನ ಹದಿಹರೆಯದ ಸುಂದರ ಕನಸು ಕಲ್ಪನೆಗೆ ಗೋಡೆ ಮೇಲೆ ನವಿಲಿನ ಚಿತ್ತಾರ ಬರೆಯುವ ಹುಮ್ಮಸ್ಸಿನವಳಾಗಿದ್ದಾಳೆ. ಏಕಕಾಲಕ್ಕೆ ತನ್ನ ಕುಟುಂಬದ ಚಕ್ರವ್ಯೂಹದಿಂದ ಮತ್ತು ದಲಿತ ಅವಮಾನದಿಂದ ಬಿಡುಗಡೆ ಹೊಂದುವ ರೂಪಕವಾಗಿದ್ದಾಳೆ. ಸಣ್ಣಯ್ಯನ ಹೆಂಡತಿ ಚಲುವಮ್ಮ ಗಂಡನನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡು ಅತ್ತೆಮನೆಯ ಅಧಿಕಾರ ಸೂತ್ರವನ್ನು ತನ್ನ ಕೈಯಲ್ಲಿರಿಸಿಕೊಳ್ಳಬೇಕೆಂಬ ಹಠದ ಸ್ವಭಾವದವಳಾಗಿದ್ದಾಳೆ. ತವರು ಮನೆಯ ಅಲ್ಪ ಮಟ್ಟಿನ ಸಿರಿವಂತಿಕೆಯನ್ನು ತನ್ನ ಬೆಳವಣಿಗೆಗೆ ಪೂರಕವಾಗಿ ಬಳಸಿಕೊಂಡಿದ್ದಾಳೆ.

ಪ್ರಜಾಪ್ರಭುತ್ವದ ಅಧಿಕಾರಶಾಹಿಯ ದರ್ಪ ದೌರ್ಜನ್ಯವನ್ನು ಅಭಿವ್ಯಕ್ತಗೊಳಿಸುವ ಇನ್ಸ್‌ಪೆಕ್ಟರ್ ಮತ್ತು ಅವನ ಸಹಾಯಕರು ವ್ಯವಸ್ಥೆಯ ಒಂದು ಮುಖಕ್ಕೆ ನಿದರ್ಶನವಾಗಿದ್ದರೆ, ದಫೇದಾರ ರೇವಣ್ಣ ಪೊಲೀಸ್ ಇಲಾಖೆಯ ಇನ್ನೊಂದು ಮುಖಕ್ಕೆ ನಿದರ್ಶನವಾಗಿದ್ದಾರೆ.

ಕಾಳಣ್ಣ ಕದ್ದುತಂದ ಕಡಲೆ ಕಾಯಿಗಳನ್ನು ಹಂಚಿಕೊಂಡು ತಿನ್ನುವ ಈ ಕುಟುಂಬ ಇನ್ನೊಬ್ಬರ ಹಸಿವನ್ನು ಹಿಂಗಿಸಲು ಸಹಾಯ ಹಸ್ತ ಚಾಚುತ್ತದೆ. ನೆರೆಮನೆಯವರಿಗೆ ಕದ್ದ ಕಡಲೆಕಾಯಿಯಲ್ಲಿಯೆ ಪಾಲುಕೊಡುವುದು, ಕಡಲೆಕಾಯಿ ತಿಂದು ಸಾಕ್ಷಿ ಉಳಿಯದಂತೆ ಸಿಪ್ಪೆಗಳನ್ನು ಬೆಂಕಿಯಲ್ಲಿ ಹಾಕಿ ಸುಡುವುದು, ಅದೇ ಬೆಂಕಿಯ ಬೆಳಕಿನಲ್ಲಿ ಹೊಸ ಬದುಕಿನ ಕನಸನ್ನು ಕಾಣುವುದು ಈ ಕಾದಂಬರಿಯ ವಿಶಿಷ್ಟ ಸಂಗತಿಯಾಗಿದೆ.

ಎತ್ತಪ್ಪನವರ ದನದ  ಹಟ್ಟಿಯಲ್ಲಿ ಇರುವ ದಷ್ಟಪುಷ್ಟ ಹಸು-ಎತ್ತುಗಳು, ದವಸ-ಧಾನ್ಯಗಳು  ಸಂಪತ್ತು ಒಂದೇ ಕಡೆ ಕೇಂದ್ರಿತವಾಗಿದೆ ಎಂಬುದಕ್ಕೆ ಸಾಕ್ಷಿ ನುಡಿಯುತ್ತವೆ. ದಲಿತರ ಹಸಿವು ಎಷ್ಟು ತೀವ್ರವಾಗಿದೆ ಎಂದರೆ ಎತ್ತಪ್ಪನವರ ಒಂದು ಎತ್ತು ಸತ್ತುಹೋದರೆ ಇಡೀ ಕೇರಿಯ ದಲಿತರ ಹಸಿವನ್ನು ನೀಗಿಸುತ್ತದೆ ಎಂಬ ಕರಾಳ ಬಯಕೆ ಶೋಷಣೆಯ ಬದುಕಿನ ದರ್ಶನ ಮಾಡಿಸುತ್ತದೆ.

ಎತ್ತಪ್ಪನವ ಕಡಲೆಕಾಯಿ ಕಳ್ಳತನವನ್ನು ಪತ್ತೆ ಮಾಡಿ , ಶಿಕ್ಷೆಕೊಡಲು ಆಸಕ್ತಿ ತೋರುವ ಪೊಲೀಸ್ ಇಲಾಖೆ ಸಾಕವ್ವನ ಕಳೆದ ಹುಂಜದ ಬಗ್ಗೆ ಮೌನ ತಾಳುತ್ತದೆ. ಇದಕ್ಕಿಂತ ಕ್ರೂರವಾದ ಸಂಗತಿಯೆಂದರೆ ಕಳೆದುಹೋದ ಹುಂಜವನ್ನು ಹುಡುಕಿಕೊಡುವದಕ್ಕಾಗಿ ಸಾಕವ್ವನ ಮತ್ತೊಂದು ಹುಂಜವನ್ನು ತಿನ್ನುವ ಪೊಲೀಸ ಭ್ರಷ್ಟಚಪಲತೆ ಇಂದಿನ ಆಡಳಿತ ವ್ಯವಸ್ಥೆಯ ದರ್ಶನ ಮಾಡಿಸುತ್ತದೆ. ಕಳೆದುಹೋದ ಹುಂಜ ಹುಡುಕಿ ಕೊಡಬೇಕಾದ ಇಲಾಖೆ ಮತ್ತೊಂದು ಹುಂಜವನ್ನು ಕಬಳಿಸುವ ಸನ್ನಹದಲ್ಲಿದೆ. ಈ ದುರಂತ ಬಡವರ, ದಲಿತರ ಒಡಲಾಳದ ಬೆಂಕಿ ಪ್ರಜ್ವಲಿಸಲು ಕಾರಣವಾಗಿದೆ.

ದಲಿತರ ಸಹಜ ಆಡುನುಡಿ, ರೂಪಕಶಕ್ತಿಯ ನಿರೂಪಣೆ, ಕಠೋರ ವಾಸ್ತವ ಘಟನೆ, ನೈಜತೆಯಿಂದ ತುಂಬಿರುವ ಪಾತ್ರಗಳು, ಹೊಸ ವಿನ್ಯಾಸದಲ್ಲಿ ಬಳಸಿದ ಭಾಷೆ ಕಾದಂಬರಿಯ ಯಶಸ್ಸನ್ನು ಸಾರುತ್ತವೆ. ಸಂಯಮಶೀಲ ದೇವನೂರ ಮಹಾದೇವ ಅವರ ಸಾಹಿತ್ಯ ಸೃಷ್ಟಿಯ `ಮಾಸ್ಟರ್ ಪೀಸ್ ಈ ಒಡಲಾಳ ಎಂಬ ವಿಮರ್ಶಕರ ಮಾತು ಸಮರ್ಪಕವಾಗಿದೆ. ಸಾಮಾನ್ಯ ಓದುಗನಿಗೂ ಸಹ ಅದೇ ಅನುಭೂತಿಯನ್ನು ನೀಡುತ್ತದೆ ; ಅದ್ಭುತ ಕಲಾಕೃತಿಯಾಗಿ ಗಮನಸೆಳೆಯುತ್ತದೆ.                      *****