Tuesday, August 20, 2013

ಮಕ್ಕಳ ಭಾವ ಕೋಶದಲ್ಲಿ ಕನ್ನಡ ಹರಳುಗಟ್ಟಬೇಕು

ಕನ್ನಡತನ ಮಕ್ಕಳ ಭಾವಕೋಶದಲ್ಲಿ ನೆಲೆಗೊಳ್ಳಬೇಕಾದರೆ ಮೊದಲು ಆ ವಿಷಯದಲ್ಲಿ ಅರಿವು-ಅಭಿರುಚಿ ಹುಟ್ಟಿಸಬೇಕು. ಅಬ್ಬರ,ಅದ್ದೂರಿ,ಸಂಭ್ರಮದ ಸಮ್ಮೇಳನ ಉತ್ಸವಗಳು ಕನ್ನಡದ ಬಗೆಗೆ ಅಭಿಮಾನವನ್ನು ಹುಟ್ಟಿಸುತ್ತವೆ ಎಂಬುದರಲ್ಲಿ ಎರಡುಮಾತಿಲ್ಲ. ಕೇವಲ ಅಭಿಮಾನ ಪಟ್ಟರೆ ಸಾಲದು. ಅರಿವು-ಅಭಿರುಚಿ ಹುಟ್ಟಿಸುವ ಕೆಲಸವೂ ನಿರಂತರವಾಗಿ ನಡೆಯಬೇಕು. ಸಮ್ಮೇಲನ,ಸಮಾವೇಶಗಳು ಒಂದು ನೆಲೆಯಲ್ಲಿ ಪ್ರೌಢರಿಗೆ ಕನ್ನಡ ಸಾಹಿತ್ಯ-ಸಂಸ್ಕೃತಿಗಳ ಸೌರಭ ಪಸರಿಸಿ ಅಭಿಮಾನವನ್ನು ವರ್ಧಿಸುತ್ತವೆ. ಈ ಸೌರಭದ ಸಾರವನ್ನು ಸ್ವೀಕರಿಸುವ ಮನಸ್ಸುಗಳು ಬಾಲ್ಯದಲ್ಲಿ ಸಾಹಿತ್ಯಿಕ-ಸಾಂಸ್ಕೃತಿಕ ಪರಿಸರದೊಂದಿಗೆ ಮುಖಾಮುಖಿಯಾಗಿದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಕೇವಲ ಮೇಲ್ಪದರಿನಲ್ಲಿ ಅಭಿಮಾನದ ಅಲೆಗಳೆದ್ದು ಕೆಲಕ್ಷಣ-ಕೆಲದಿನಗಳಲ್ಲಿ ಮಾಯವಾಗುವ ಅಪಾಯವಿದೆ. ಅದಕ್ಕಾಗಿ ಮಕ್ಕಳಲ್ಲಿ ಕನ್ನಡ ಪ್ರೀತಿ ಹುಟ್ಟುವ ಹಾಗೆ ಚಟುವಟಿಕೆಗಳನ್ನು (ಸಮಾರಂಭ -ಕಾರ್ಯುಕ್ರಮವಲ್ಲ) ರೂಪಿಸುವದರತ್ತ ಕಸಾಪ ಆಸಕ್ತಿ ವಹಿಸಬೇಕು; ಮಕ್ಕಳಲ್ಲಿ ಕನ್ನಡದ ಅರಿವು-ಅಭಿಮಾನ-ಪ್ರಜ್ಞೆಯನ್ನು ಜಾಗೃತಗೊಳಿಸಬೇಕು.

ಪ್ರಾಥಮಿಕ,ಪ್ರೌಢ ಮತ್ತು ಪದವಿ ಪೂರ್ವ ಸೈಕ್ಷಣಿಕ ಹಂತಗಳಲ್ಲಿ ಅವರ ವಯೋಸಹಜ ಮನೋವೃತ್ತಿ ಗನುಗುಣವಾಗಿ ಚಟುವಟಿಕೆಗಳ ಕ್ರಿಯಾಯೋಜನೆಯನ್ನು ರೂಪಿಸಬೇಕು.  ಆ ಚಟುವಟಿಕೆಗಳು ವರ್ಷಪೂರ್ತಿ ಅವರ ಶೈಕ್ಷಣಿಕ ಕಲಿಕೆಯ ಅವಿಭಾಜ್ಯ ಅಂಗವೆಂಬಂತೆ ನಡೆಯಬೇಕು. ಕಸಾಪ ತಾಲೂಕು/ಹೋಬಳಿ ಘಟಕಗಳು ಒಂದು ಕನ್ನಡಪಡೆಯನ್ನು ರಚಿಸಬೇಕು. ಅದರಲ್ಲಿಕನ್ನಡತನದ ಚಟುವಟಿಕೆಗಳಲ್ಲಿ ಅಭಿರುಚಿ-ಪರಿಣತಿ ಇರುವ ಆಸಕ್ತರನ್ನೇ ಆರಿಸಬೇಕು. ಅವರು ಕನ್ನಡವನ್ನು ಪ್ರೀತಿಸುವ ಬೆಳೆಸುವ ಶ್ರದ್ಧೆಯುಳ್ಳವರಾಗಿರಬೇಕು. ತಮ್ಮನ್ನು ಕನ್ನಡಕ್ಕೆ ಅರ್ಪಿಸಿಕೊಳ್ಳಬೇಕು. ತಾವು ಪಡೆದ ಕನ್ನಡ ಸಾಹಿತ್ಯ,ಸಂಸ್ಕೃತಿ,ಭಾಷಾ ಸೊಗಡು ಸೊಬಗುಗಳನ್ನು ಉಣಬಡಿಸಲು ಸಿದ್ಧರಿರಬೆಕು.

ಸುತ್ತ ಮುತ್ತಲ ಶಾಲೆಗಳಿಗೆ ತೆರಳಿ ತರಗತಿಗಳಲ್ಲಿ ಕನ್ನಡತನದ ಚಟುವಟಿಕೆ ನಡೆಸಬೇಕು. ತಾಲೂಕಿನ ಶಿಕ್ಷಣಾಧಿಕಾರಿಗಳ ಸಹಯೋಗ ಪಡೆಯಬೇಕು.ಆ ಚಟುವಟಿಕೆಗಳು ಮಕ್ಕಳಲ್ಲಿ ಬೆರಗು ಕುತೂಹಲ ಹುಟ್ಟಿಸಿ ರಂಜನೆಯನ್ನೂ ನೀಡುವ, ಕಲ್ಪನೆ ಕನಸುಗಳನ್ನು ಬಿತ್ತುವ ಸೃಜನಶೀಲ ಗುಣಹೊಂದಿರಬೇಕು.

ಕಸಾಪದ ಕ್ರಿಯಾಯೋಜನೆಯಲ್ಲಿ ಈ ಕೆಳಗಿನ ಮಾದರಿಯ ಚಟುವಟಿಕೆಗಳಿರಬೇಕು.

* ಬಿಡಿಸೇಳು ಒಗಟು : ಜನಪದ ಒಗಟು, ಲೆಕ್ಕ, ಭಾಷಾ ಚಮತ್ಕಾರಗಳನ್ನು ಬಳಸುವುದು.

* ಚಿತ್ರ ಚಿತ್ತಾರ : ಅಕ್ಷರಗಳಲ್ಲಿ ಚಿತ್ರಬಿಡಿಸುವುದು. (ಇ ಅಕ್ಷರದಲ್ಲಿ ಇಲಿ, ಗಿ ಅಕ್ಷರದಲ್ಲಿ ಗಿಳಿ)

* ಪುಸ್ತಕ ಪ್ರೀತಿ : ಕತೆ ಕವಿತೆ ಪ್ರಬಂಧ ಪ್ರವಾಸ ಜೀವನ ಚರಿತ್ರೆ ಮುಂತಾದ ಪುಸ್ತಕಗಳನ್ನು ಒಂದು ತಾಸು ಓದಲು  ಕೊಟ್ಟು ಅನಂತರ ಕೃತಿ ಕುರಿತು ಮಾತನಾಡಿಸುವುದು/ಬರೆಸುವುದು.

* ಪದಬಂಧ : ತರಗತಿಗೆ ತಕ್ಕಂತೆ ಪದಬಂಧ ರಚಿಸಿ ನಿರ್ದಿಷ್ಟ ಅವಧಿಯಲ್ಲಿ ಬಿಡಿಸಲು ಹೇಳುವುದು.

* ಪದ ಹುಡುಕು : ರತ್ನಕೋಶ ಕೊಟ್ಟು ಪದಗಳನ್ನು ಹುಡುಕಿ ಪುಟಸಹಿತ ಬರೆಯಲು ಹೇಳುವುದು.

* ಅಕ್ಷರ ಸುಡೊಕು : ಕೋಟ ಶಿವರಾಮ ಕಾರಂತ- ಈ ರೀತಿಯ  ಒಂಬತ್ತು ಅಕ್ಷರಗಳ ಸುಡೊಕು ರಚಿಸಿ ಬಿಡಿಸಲು ಹೇಳುವುದು.

* ಕತೆ ಕಟ್ಟು : ಜನಪದ ಸಂಚಿತ,ಹಾಸ್ಯ,ಚಮತ್ಕಾರಿಕ ಕತೆಗಳನ್ನು ಹೇಳಿ ಅವರಿಂದ ಮರಳಿ ಬರೆಸುವುದು.

* ಆಡು-ಹಾಡು : ಜನಪದ ಇಲ್ಲವೆ ಪ್ರಸಿದ್ಧ ಕವಿಗಳ ಸರಳ ಸುಂದರ ಕವಿತೆಗಳನ್ನು ,ಶಿಶುಪ್ರಾಸಗಳನ್ನು ಹಾಡಿಸುವ ಕ್ರಿಯಾತ್ಮಕ ಚಟುವಟಿಕೆ

* ಮಕ್ಕಳ ಕೃತಿಗಳ ಪರಿಚಯ ; ಮಕ್ಕಳೇ ಬರೆದ ಕೃತಿಗಳನ್ನು ಓದಿ,ವಾಚನ ಮಾಡಿ ಅವರಲ್ಲಿಯ ಸೃಜನಶೀಲ ಪ್ರತಿಭೆಯನ್ನು ಉದ್ದೀಪಿಸುವುದು.

* ಮಕ್ಕಳಿಗಾಗಿ ರಚಿತವಾದ ಕೃತಿಗಳ ಪರಿಚಯ ; ಕುವೆಂಪು, ರಾಜರತ್ನಂ,ಶಂ.ಗು.ಬಿರಾದಾರ ಮುಂ. ಕೃತಿಗಳನ್ನು ವಾಚಿಸಿ ಅಭಿರುಚಿ ಹುಟ್ಟಿಸುವುದು.

* ಅದ್ಭುತಲೋಕ-ವಿಸ್ಮಯ ವಿಶ್ವ : ಪೂರ್ಣಚಂದ್ರ ತೇಜಸ್ವಿ ಅವರ ವಿಸ್ಮಯ-೧,೨,೩, ಮಿಲೆನಿಯಂ ಸರಣಿ , ಮಕ್ಕಳ ಸಾಹಸದ ಕೃತಿಗಳನ್ನು ಪರಿಚಯಿಸುವುದು. ಮತ್ತು ಪ್ರದರ್ಶಿಸುವುದು.

ಹೀಗೆ ಕೇಳುವ-ಹೇಳುವ ವಾಚಕ ಪರಂಪರೆಯ ಕನ್ನಡ, ಆಡುವ ಹಾಡುವ ಕ್ರಿಯಾತ್ಮಕ ಕನ್ನಡ, ಬರೆಯುವ-ಓದುವ ಮಾರ್ಗ ಕನ್ನಡ ಮತ್ತು ಕತೆ ಕವಿತೆಗಳನ್ನು  ಲಯಬದ್ಧವಾಗಿ ಓದುವ ವಾಚನ ಕನ್ನಡವನ್ನು ಅವರ ಭಾವಕೋಶದಲ್ಲಿ  ಬುದ್ಧಿಕೋಶದಲ್ಲಿ ನೆಲೆಗೊಳಿಸಬೇಕು.

ಎಸ್. ಬಿ. ಜೋಗೂರ ಅವರು ಹೇಳುವಂತೆ ಗ್ರಂಥಾಲಯ-ಪುಸ್ತಕ ಸಂಸ್ಕೃತಿಯನ್ನೂ ಬೆಳೆಸಬೇಕು.

ಇಂತಹ ಚಟುವಟಿಕೆಗಳನ್ನು ನಾವು (ನಾಲ್ಕಾರು ಜನ ಗೆಳೆಯರು)` ಹುಡುಗಾಟ-ಹುಡುಕಾಟ ತಂಡ ಕಟ್ಟಿಕೊಂಡು ೧೦ ವರ್‍ಷಗಳಿಂದ ನಡೆಸುತ್ತ ಬಂದಿದ್ದೇವೆ. ವರ್ಷದಲ್ಲಿ ನಾಲ್ಕಾರು ಶಾಲೆಗಳಲ್ಲಿ ಮಾತ್ರ ನಡೆಸಲು ಸಾಧ್ಯವಾಗಿದೆ. ಬಾಲವಿಕಾಸ ಅಕೆಡೆಮಿಯವರ ಸಹಯೋಗದಲ್ಲಿಯೂ ಎರಡು ವರ್‍ಷ ಚಟುವಟಿಕೆ ನಡೆಸಿದ ಅನುಭವವಿದೆ. ನಮ್ಮ ಸುತ್ತಮುತ್ತಲ ಊರುಗಳಲ್ಲಿ ಅಲ್ಲದೇ ಧಾರವಾಡ ಬಾಲಬಳಗ ಶಾಲೆಯಲ್ಲಿಯೂ ಒಮ್ಮೆ ಈ ಪ್ರಯೋಗವನ್ನು ಮಾಡಿದ್ದೇವೆ.

ಮಕ್ಕಳಲ್ಲಿ ಮಕ್ಕಳಾಗಿ ಬೆರೆತು ನಡೆಸುವ ಈ ಚಟುವಟಿಕೆ ಮಕ್ಕಳಿಗೆ ಮತ್ತು ನಮಗೆ ಹೊಸ ಸಾಧ್ಯತೆಯ ದಾರಿಯನ್ನು ತೋರಿಸಿದೆ.ಅವರಲ್ಲಿ ಓದಿನ ಹಸಿವನ್ನು ಹುಟ್ಟಿಸಿದೆ.ಅವರ ಸೃಜನಶೀಲ ಪ್ರತಿಭೆಯನ್ನು ಚೇತನಗೊಳಿಸಿದೆ.

                                     

No comments:

Post a Comment