Tuesday, August 20, 2013

ನಮಗೆ ಬೇಕಾಗಿರುವ ಇಂಗ್ಲಿಷ್

``ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ``ಕನ್ನಡವೇ ಸತ್ಯ ಕನ್ನಡವೇ ನಿತ್ಯ  ಎಂದು ಹಾಡಿ ಕನ್ನಡಿಗರ ಮನಸ್ಸು ಗೆದ್ದ ಕುವೆಂಪು`ಯುಗದ ಕವಿ ಜಗದ ಕವಿಯಾಗಿದ್ದಾರೆ. ತಮ್ಮ ಪ್ರಖರವಾದ ವೈಚಾರಿಕ ಪ್ರಜ್ಞೆಯಿಂದ ಸಮಕಾಲೀನ ಸಂಗತಿಗಳನ್ನು ವಸ್ತುನಿಷ್ಠವಾಗಿ ವಿವೇಚಿಸಿದ ಅಪರೂಪದ ಲೇಖಕರಿವರು.

ಕರ್ನಾಟಕವಷ್ಟೆ ಅಲ್ಲ ಇಡೀ ಭಾರತವೇ ಎದುರಿಸುತ್ತಿರುವ ಪ್ರಚಲಿತ ಸಮಸ್ಯೆ ಭಾಷೆಯದು. ವೈವಿಧ್ಯಮಯ ಭಾಷೆಗಳ ರಾಷ್ಟ್ರವಾದ ಭಾರತದಲ್ಲಿ ಕನ್ನಡ ಭಾಷೆ ಬದುಕಿನ ಹಲವು ಕ್ಷೇತ್ರಗಳಲ್ಲಿ ವಿಶಿಷ್ಟ ಸಮಸ್ಯೆಯನ್ನು ಎದುರಿಸುತ್ತಲಿದೆ. ``ನಮಗೆ ಬೇಕಾಗಿರುವ ಇಂಗ್ಲಿಷಂತಹ ಸಮಸ್ಯೆಯ ಮೇಲೆ ಬೆಳಕು ಚಲ್ಲುವ ಕುವೆಂಪು ವಿರಚಿತ ಲೇಖನ. ಈ ಲೇಖನದಲ್ಲಿ ವಸ್ತುನಿಷ್ಠ ದೃಷ್ಟಿಕೋನದ, ವೈಚಾರಿಕ ಪ್ರಜ್ಞೆಯ ಕುವೆಂಪು ಅವರು ಭಾಷಾರಣರಂಗದಲ್ಲಿಯ ತುಮುಲ ಯುದ್ಧಸನ್ನಿವೇಶವನ್ನು ತರ್ಕಬದ್ಧ ರೀತಿಯಲ್ಲಿ ವಿವೇಚಿಸಿದ್ದಾರೆ.

ಪ್ರದೇಶ ಭಾಷೆ, ಸಂಪರ್ಕ ಭಾಷೆ ಮತ್ತು ಅಂತಾರಾಷ್ಟ್ರೀಯ ಭಾಷೆ ಈ ಮೂರರಲ್ಲಿ ಯಾವುದಕ್ಕೆ ಯಾವ ಸ್ಥಾನ ಕೊಡಬೇಕು? ಏಕೆ ಕೊಡಬೇಕು? ಎಂಬುದೇ ಈ ಲೇಖನದ ತಿರುಳು. ದೇಸಿ ಪರಂಪರೆಯ ಗಾಂಧೀಜಿ ಮತ್ತು ಮನಶಾಸ್ತ್ರಜ್ಞರು, ಶ್ರೇಷ್ಠ ದೇಶಭಕ್ತರು ಈ ವಿಚಾರವಾಗಿ ಕೂಲಂಕಷವಾಗಿ ವಿವೇಚಿಸಿ ಖಚಿತವಾದ ಕೊನೆಯ ಹಂತವನ್ನು ತಲುಪಿದ್ದಾರೆ.

ಪ್ರದೇಶ ಭಾಷೆಗೆ ಪ್ರಥಮ ಸ್ಥಾನ, ಕೇಂದ್ರದ ಆಡಳಿತ ದೃಷ್ಟಿಯಿಂದ ಸಂಪರ್ಕ ಭಾಷೆಗೆ ದ್ವಿತೀಯ ಸ್ಥಾನ, ಅಂತಾರಾಷ್ಟ್ರೀಯಭಾಷೆಗೆ ಕೊನೆಯ ಐಚ್ಛಿಕ ಸ್ಥಾನ. ಪ್ರದೇಶ ಭಾಷೆಯೇ ಆಡಳಿತ ಭಾಷೆಯಾಗಬೇಕು, ಅಲ್ಲಿಯ ಶಿಕ್ಷಣ ಪ್ರದೇಶ ಭಾಷಾ ಮಾಧ್ಯಮದಲ್ಲಿಯೇ ನಡೆಯಬೇಕು ಎಂಬುದು ಈ ಪರಿಣಿತರ ಇಂಗಿತವಾಗಿದೆ. 

ಪ್ರದೇಶ ಭಾಷೆಗೆ ಪ್ರಥಮ ಸ್ಥಾನ ಸಲ್ಲಬೇಕು ಎಂದು ಹೇಳಿದಾಕ್ಷಣ, ಇಂಗ್ಲಿಷ್ ಭಾಷೆಯನ್ನು, ಇಂಗ್ಲಿಷ್ ಭಾಷೆಯ ಅಪಾರ ಜ್ಞಾನವನ್ನು ದೂರಸರಿಸಿದಂತಾಗುತ್ತದೆ ಎಂಬುದು ಒಂದು ಭ್ರಮೆಯಾಗಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಇಂಗ್ಲಿಷನ್ನು ಎರಡು ದೃಷ್ಟಿಯಲ್ಲಿ ಕಲಿಯಬೇಕಾದ ಅಗತ್ಯವಿದೆ. ಒಂದು ಸಾಹಿತ್ಯ ದೃಷ್ಟಿ ಇನ್ನೊಂದು ಭಾಷಾದೃಷ್ಟಿ.

ಪ್ರದೇಶಭಾಷೆಯನ್ನು ಪ್ರೀತಿಸುವ, ವೈಜ್ಞಾನಿಕವಾಗಿ ಪ್ರದೇಶ ಭಾಷೆಯೇ ಶಿಕ್ಷಣ ಮಾಧ್ಯಮ ವಾಗಬೇಕೆನ್ನುವ ಪ್ರದೇಶಭಾಷಾ ಅಭಿಮಾನಿಗಳನ್ನು ವಿದ್ಯಾಸಂಸ್ಕೃತಿದ್ವೇಷಿಗಳೆಂದು, ಸಂಕುಚಿತ ಮನೋಭಾವದವರೆಂದು ಟೀಕಿಸುವ ಅಗತ್ಯವಿಲ್ಲ. ಇಂಗ್ಲಿಷ್ ಮೋಹಿಗಳು ಖಚಿತವಾಗಿ ತಿಳಿಯಬೇಕಾದ ನೈಜ ಸತ್ಯವೊಂದಿದೆ- ಅದು `ಭಾರತೀಯರಿಗೆ ಇಂಗ್ಲಿಷ್ ಬೇಕೇಬೇಕು ಎಂಬುದು.

ಭಾರತದಲ್ಲಿ ಇಂಗ್ಲಿಷ್ ಉಳಿಯಬೇಕೆಂದು ನಿಶ್ಚಯಿಸಿದ ಮೇಲೆ ಅದು ಯಾವ ರೂಪದಲ್ಲಿ, ಯಾವ ಪ್ರಮಾಣದಲ್ಲಿ, ಯಾರಿಗಾಗಿ ಮತ್ತು ಏತಕ್ಕಾಗಿ ಉಳಿಯಬೇಕು ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಇಂಗ್ಲಿಷ್ ಭಾರತವನ್ನು ಪವೇಶಿಸಿದ್ದು ರಾಜಕೀಯ ಕಾರಣಕ್ಕಾಗಿ. ಶಿಕ್ಷಣದಲ್ಲಿ ಇಂಗ್ಲಿಷ್ ಅತ್ಯಗತ್ಯವಾದದ್ದು ಬ್ರಿಟಿಶರ ಆಡಳಿತ ಕಾಲದಲ್ಲಿ. ಆದರೆ ಈಗ ಭಾರತ ಸ್ವತಂತ್ರವಾಗಿದೆ. ಸ್ವಾವಲಂಬಿ ವ್ಯಕ್ತಿತ್ವದ ಮೇಲೆ ಅಭಿವೃದ್ಧಿ ಪಡೆಯುತ್ತಲಿದೆ. ಇಂತಹ ಸಂದರ್ಭದಲ್ಲಿ ಇಂಗ್ಲಿಷ್ ಭಾಷೆಗೆ ಸಲ್ಲಬೇಕಾದ ಸ್ಥಾನಯಾವುದು ? ಇಂದು ಇಂಗ್ಲಿಷನ್ನು ಬಿಡುವಂತಿಲ್ಲ; ಆದರೆ ಅದಕ್ಕೆ ಪ್ರಥಮ ಸ್ಥಾನವನ್ನು ಕೊಡುವಂತಿಲ್ಲ. ಇಂದು ಇಂಗ್ಲಿಷ್ ಹಲವರು ಕಲಿಯುವ ಭಾಷೆಯಲ್ಲ; ಕೆಲವರು ಕಲಿಯುವ ಭಾಷೆ. ಈ ಮಾತುಗಳನ್ನು ಇಂಗ್ಲಿಷ್ ಮೋಹಿಗಳು ಮೊದಲು ಅರ್ಥಮಾಡಿಕೊಳ್ಳಬೇಕಾಗಿದೆ.

ಒಂದು ವೇಳೆ ಇಂಗ್ಲಿಷ್ ಭಾಷೆಗೆ ಪ್ರಥಮಸ್ಥಾನ ಕೊಟ್ಟದ್ದಾದರೆ ಬಾಲಕರು ಮತ್ತು ಯುವಕರು ತಮ್ಮ ಸಾಮರ್ಥ್ಯ ಶಕ್ತಿಯನ್ನೆಲ್ಲ ಆ ಭಾಷೆಯನ್ನು ಕಲಿಯುವದಕ್ಕಾಗಿ ಮೀಸಲಿಡಬೇಕಾಗುತ್ತದೆ. ವ್ಯಕ್ತಿಯ ಭಾವ ಮತ್ತು ಜ್ಞಾನ ಅರಳಬೇಕಾದ ಸಂದರ್ಭದಲ್ಲಿಯೇ ಅವನ ಅಶಾಭಾವನೆಯನ್ನು ಚಿವುಟಿಹಾಕಿ ಅಧೈರ್ಯ ಉಂಟು ಮಾಡಿ ಅವರ ಬದುಕಿಗೆ ಅಡತಡೆಯಾಗುತ್ತದೆ. ಬಾಲಕರ, ಯುವಕರ ಭಾವ ಮತ್ತು ಚಿಂತನೆ ಜ್ಞಾನವಾಗಿ ಪರಿವರ್ತನೆ ಹೊಂದದೆ   ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತದೆ. ಅಲ್ಲದೆ ಭಾರತದಂತಹ ದೇಶದಲ್ಲಿ ಇಂಗ್ಲಿಷ್ ಪಾಠ ಮಾಡುವ ಶಿಕ್ಷಕರ ಮಟ್ಟವು ತುಂಬಾ ಇಳಿದುಹೋಗಿದೆ. ಹೀಗಾಗಿ ಈ ಹೊರಭಾಷೆಯ ಕಲ್ಲುಚಪ್ಪಡಿ ನಮ್ಮ ವಿದ್ಯಾರ್ಥಿಗಳ ತಲೆಯ ಮೇಲೆ ಬೀಳದಂತೆ ರಕ್ಷಿಸಬೇಕಾಗಿದೆ. ಬಾಲಕ ಮತ್ತು ಯುವಕರ ಕಲಿಕಾಮಟ್ಟ ಸುಧಾರಿಸಬೇಕಾದರೆ ಇಂಗ್ಲಿಷ್ ಪಠ್ಯಪುಸ್ತಕವನ್ನು ಹೆಚ್ಚಿಸಬೇಕಾಗಿಲ್ಲ; ಪರೀಕ್ಷೆಯಲ್ಲಿ ಕೃಪಾಂಕಗಳನ್ನು ಕೊಡಬೇಕಾಗಿಲ್ಲ. ಇಂತಹ ದುರಂತ ನಾಟಕವನ್ನು ಬಿಟ್ಟು ಕೆಲವರಿಗೆ ಮಾತ್ರ ಇಂಗ್ಲಿಷ್ ಭಾಷೆಯನ್ನು ಸಮರ್ಪಕವಾಗಿ ಕಲಿಸಬೇಕು. ಅವರು ಆ ಭಾಷೆಯಲ್ಲಿ ಹೆಚ್ಚಿನ ಪ್ರೌಢಿಮೆ, ಪರಿಣತಿ ಪಡೆಯಬೇಕು. ಆ ಭಾಷೆಯನ್ನು ಅಸ್ಖಲಿತವಾಗಿ ಸರಳವಾಗಿ ಮಾತನಾಡಬೇಕು. ನಮ್ಮ ಸಾಹಿತ್ಯ, ಸಂಸ್ಕೃತಿಯನ್ನು ಇಂಗ್ಲಿಷ್ ಭಾಷೆಗೆ ಪರಿಚಯಿಸುವ, ಇಂಗ್ಲಿಷ್ ಭಾಷೆಯ ಅಪಾರ ಜ್ಞಾನವನ್ನು ಪ್ರದೇಶ ಭಾಷೆಗೆ ತಂದುಕೊಡುವ ಮಧ್ಯವರ್ತಿಗಳಾಗಬೇಕು.

ಸಾಹಿತ್ಯ ದೃಷ್ಟಿಯಿಂದ ಇಂಗ್ಲಿಷ್ ಭಾಷೆಯನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಅದೇ ಭಾಷೆಯ ಮೂಲ ಕೃತಿಯನ್ನು ಓದಿ ತಿಳಿಯಬೇಕಾದಷ್ಟು ಪಾಂಡಿತ್ಯ ಪಡೆಯಬೇಕಾದ ಅಗತ್ಯವಿಲ್ಲ. ನಮ್ಮ ಪ್ರದೇಶ ಭಾಷೆಯಲ್ಲಿಯೇ ಆ ಸಾಹಿತ್ಯ ಸೌಂದರ್ಯವನ್ನು ಸವಿದರೆ ಅದು ಅವರಿಗೆ ರಕ್ತಗತವಾಗುವದರಲ್ಲಿ ಸಂಶಯವಿಲ್ಲ. ಮಿಲ್ಟನ್, ವರ್ಡ್ಸ್‌ವರ್ತ್, ಶೇಕ್ಸ್‌ಪೀಯರ್ ಮುಂತಾದ ಕವಿಗಳ ಕೃತಿಗಳನ್ನು ಕನ್ನಡದ ಮೂಲಕವೇ ಬೋಧಿಸಬಹುದು ಎಂಬ ನಿಜಸ್ಥಿತಿಯನ್ನು ನಾವೆಲ್ಲರೂ ಅರಿಯಬೇಕಾಗಿದೆ. ಇಂಗ್ಲಿಷ್ ಭಾಷೆಯಲ್ಲಿ ತನ್ನ ಅನುಭವವನ್ನು ವ್ಯಕ್ತಗೊಳಿಸುವ ಶಕ್ತಿಯಿಲ್ಲದ ವಿದ್ಯಾರ್ಥಿ ಕಂಠಪಾಠ ಮಾಡಿ ಉರುಹೊಡೆದು ತೇರ್ಗಡೆಯಾದರೆ ಅದರಿಂದಾಗುವ ಪ್ರಯೋಜನವೇನು ? ನಮ್ಮಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗುವುದಕ್ಕೆ ಇಂಗ್ಲಿಷ್ ಮಾಧ್ಯಮ ಕಾರಣವಾಗಿದೆ. ಅವರ ಬುದ್ಧಿಶಕ್ತಿ, ವಿಷಯ ಸಂಗ್ರಹ ಸಾಕಷ್ಟಿದ್ದರೂ ಅದು ಪರ್ಯೋಜನಕ್ಕೆ ಬರುವುದಿಲ್ಲ.

ಈ ಎರಡೂ ದೃಷ್ಟಿಯಿಂದ ಇಂಗ್ಲಿಷನ್ನು ಸಮರ್ಥವಾಗಿ ಕಲಿಸಿದರೆ ಇಂಗ್ಲಿಷ್ ಭಾಷೆ ಕೆಲವರಲ್ಲಿ ಭಾಷೆಯಾಗಿ ಕೆಲವರಲ್ಲಿ ಸಾಹಿತ್ಯವಾಗಿ ಜೀವಂತವಾಗಿ ಉಳಿದುಕೊಳ್ಳುತ್ತದೆ. ಈ ಪ್ರಯೋಗದಲ್ಲಿ ವಿದ್ಯಾರ್ಥಿಯ ಭಾವನಷ್ಟವಾಗಲಿ, ಬುದ್ಧಿದಾರಿದ್ರ್ಯವಾಗಲಿ ಸಂಭವಿಸುವದಿಲ್ಲ.

ಕನ್ನಡ ಸಾಹಿತ್ಯ ವೈವಿಧ್ಯಮಯ ಕ್ಷೇತ್ರಗಳಲ್ಲಿ ಹೊಸ ಹೊಸ ವಿನ್ಯಾಸದಲ್ಲಿ ಬೆಳೆದು ಪ್ರಗತಿ ಹೊಂದುತ್ತಲಿದೆ. ಇಂಗ್ಲಿಷ್ ಸಾಹಿತ್ಯವನ್ನು ಸಮಗ್ರವಾಗಿ ಓದಿದ ಪಂಡಿತರು ಸಹ ಬೆರಗಾಗುವಷ್ಟು ಕನ್ನಡ ಸಾಹಿತ್ಯ ಸಮೃದ್ಧಿ ಹೊಂದಿದೆ ; ಶ್ರೇಷ್ಠತೆಯನ್ನು ಪಡೆದಿದೆ. ಆದ್ದರಿಂದ ``ನಮಗೆ ಬೇಕಾಗಿರುವ ಇಂಗ್ಲಿಷ್ ಈ ಸ್ವರೂಪದಲ್ಲಿದ್ದರೆ ಮಾತ್ರ ಇಂಗ್ಲಿಷ್‌ಗೂ ಪ್ರಯೋಜನ , ಕನ್ನಡಕ್ಕೂ ಪ್ರಯೋಜನ ಎಂಬುದುಕುವೆಂಪು ಅವರ ಸ್ಪಷ್ಟ ಅಭಿಪ್ರಾಯವಾಗಿದೆ.

*****

1 comment:

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ. jayakumarcsj@gmail.com

    ReplyDelete